top of page

HISTORY - HEMANTHA GAANA

ಹೇಮಂತ ಗಾನದ ಹಿನ್ನೆಲೆ...

  • ಹೊಯ್ಸಳ ಕನ್ನಡ ಕೂಟ ಹಮ್ಮಿಕೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ’ಹೇಮಂತ ಗಾನ’ ಅತ್ಯಂತ ಜನಪ್ರಿಯ ಕಾರ್ಯಕ್ರಮ. ಜನೆವರಿ ತಿಂಗಳಿನ ಚಳಿಯಲ್ಲಿ ನಡೆವ ಈ ಕಾರ್ಯಕ್ರಮದಲ್ಲಿ ಎಲ್ಲಾ ವಯಸ್ಸಿನ ಉತ್ಸುಕರಿಗೆ ತಮ್ಮ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸಲು ಕನ್ನಡ ಕೂಟ ಸಮಾನ ಅವಕಾಶ ಮತ್ತು ವೇದಿಕೆಯನ್ನು ಒದಗಿಸುತ್ತದೆ. ಈ ಕಾರ್ಯಕ್ರಮ ಆರಂಭವಾದ ಬಗೆ ಮತ್ತು ’ಹೇಮಂತ ಗಾನ’ ಹೆಸರಿನ ಹಿಂದಿನ ಘಟನೆಯ ಬಗ್ಗೆ ಒಂದಿಷ್ಟು ವಿಷಯಗಳನ್ನು, ಈ ಕಾರ್ಯಕ್ರಮವನ್ನು ಆರಂಭಿಸಲು ಕಾರಣಕರ್ತರಲ್ಲಿ ಒಬ್ಬರಾದ ಯಶವಂತ್ ಗಡ್ಡಿ ಅವರಿಂದ ತಿಳಿದುಕೊಳ್ಳೋಣ, ಬನ್ನಿ..

  •  

  • ೨೦೦೯ರ ನವೆಂಬರ್ ದಿನಗಳು.. ಬಹಳಷ್ಟು ಜನರ ತರಹ ನನಗೂ ಶುಕ್ರವಾರದ ಸಂಜೆ, ’ಸವಿಸಂಜೆ’. ಈ ಸವಿಸಂಜೆಯಂದು ಸಮಾನ ಮನಸ್ಕರ ಜೊತೆ ಹರಟೆ ಕೊಚ್ಚುವುದು ನನ್ನ ಅಚ್ಚುಮೆಚ್ಚಿನ ಕಾರ್ಯಕ್ರಮಗಳಲ್ಲೊಂದು. ಆ ದಿನದ ನನ್ನ ಹರಟೆ ಶ್ರೀಮತಿ ಸೌಭಾಗ್ಯ ಕೋಮರ್ಲ ಅವರ ಜೊತೆ. ನಮ್ಮಿಬ್ಬರ ಮಾತುಕತೆಯ ವಿಷಯ ಎಲ್ಲಿಂದ ಆರಂಭವಾದರೂ ಮುಕ್ತಾಯವಾಗುವುದು ನಮ್ಮಿಬ್ಬರಿಗೂ ಪ್ರಿಯವಾದ ಕನ್ನಡ ಭಾವಗೀತೆಗಳು ಮತ್ತು ಹಳೆಯ ಚಲನಚಿತ್ರಗೀತೆಗಳ ವಿಷಯದೊಂದಿಗೆ.

  • ಈ ಸಂಭಾಷಣೆಯ ಸಮಯದಲ್ಲಿ ನಮ್ಮಂತೆಯೇ ಆಸಕ್ತಿಯುಳ್ಳ ಇತರ ಜನರನ್ನು ಕೂಡಿಸಿ ’ಸಂಗೀತ ಸಂಜೆ’ ಹಮ್ಮಿಕೊಳ್ಳಬಾರದೇಕೆ ಎಂಬ ಉತ್ಸಾಹ ಭಾಗ್ಯ ಅವರಲ್ಲಿ ಮೂಡಿತು, ತಮ್ಮದೇ ಮನೆಯಲ್ಲಿ ಈ ಕಾರ್ಯಕ್ರಮವನ್ನು ಇಟ್ಟುಕೊಳ್ಳಲು ಸಂತೋಷದಿಂದ ಒಪ್ಪಿಕೊಂಡಿದ್ದೂ ಆಯಿತು.

  • ಸರಿ! ಆಸಕ್ತಿಯುಳ್ಳ ಜನರಿಗೆ ಆಮಂತ್ರಣ ಕಳಿಸುವ ಸರದಿ ನನ್ನದು. ಒಂದೈದು ನಿಮಿಷ ಯೋಚನೆ ಮಾಡಿ ಆಮಂತ್ರಣ ಪತ್ರಿಕೆ ತಯಾರು ಮಾಡಿದೆ; ಹಲವಾರು ಜನರಿಗೆ ಕಳಿಸಿದ್ದೂ ಆಯ್ತು. ನಮ್ಮ ನಿರೀಕ್ಷೆಗೂ ಮೀರಿ ಬಹಳಷ್ಟು ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಆಸಕ್ತಿ ತೋರಿದರು. ಅವರಲ್ಲಿ ನಾವು ಆಮಂತ್ರಣ ಕಳಿಸದ ಜನರೂ ಇದ್ದರು (ಬೋಂಡಾ-ಕಾಫಿಯ ಪ್ರಭಾವವಿರಬಹುದೆ!)

  • ನೂರಕ್ಕೂ ಮೀರಿದ ಅತಿಥಿಗಳ ಪಟ್ಟಿ ನೋಡಿ ಭಾಗ್ಯರವರಿಗೆ ನಿಜಕ್ಕೂ ದಿಗಿಲಾಯ್ತು. ಇಷ್ಟೊಂದು ಜನ ಸೇರುವಾಗ ಮನೆಯಲ್ಲಿ ಈ ಕಾರ್ಯಕ್ರಮ ಇಟ್ಟುಕೊಳ್ಳುವುದು ಕಷ್ಟವೆಂದು ಖಾತ್ರಿಯಾಯ್ತು. ಆಗ ನಾವು ವಾಸಮಾಡುತ್ತಿದ್ದ ಅಪಾರ್ಟ್ಮೆಟ್ ನ ಸಮುದಾಯ ಭವನಕ್ಕೆ ಈ ಕಾರ್ಯಕ್ರಮವನ್ನು ವರ್ಗಾಯಿಸಿದೆವು.

  • ಅಂದುಕೊಂಡಂತೆ ಕಾರ್ಯಕ್ರಮ ಬಹಳ ಚನ್ನಾಗಿ ನೆರವೇರಿತು. ಸುಮಾರು ೨೫-೩೦ ಕುಟುಂಬಗಳು ಭಾಗವಹಿಸಿದ್ದ ಆ ಕಾರ್ಯಕ್ರಮದಲ್ಲಿ ಬಹಳಷ್ಟು ಜನ ತಮಗೆ ಇಷ್ಟವಾದ ಚಲನಚಿತ್ರ ಗೀತೆ-ಭಾವಗೀತೆ-ಭಕ್ತಿಗೀತೆ-ಜನಪದಗೀತೆಗಳನ್ನು ಹಾಡಿದರು.

  • ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ವರ್ಷಕ್ಕೊಮ್ಮೆ ಹಮ್ಮಿಕೊಳ್ಳುವ ನಿರ್ಧಾರವನ್ನು ಮಾಡಿದೆವು.

  • ಅಂದು ಬಂದಿದ್ದ ಹೊಯ್ಸಳ ಕನ್ನಡ ಕೂಟದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದ ದೀಪಕ್ ಮೂರ್ತಿ, ಕೃಷ್ನಮೂರ್ತಿ ಬೀಮನಕಟ್ಟೆಯವರು ಈ ಕಾರ್ಯಕ್ರಮವನ್ನು ಕನ್ನಡಕೂಟದಿಂದಲೇ ಅಧಿಕೃತವಾಗಿ ನಡೆಸಿಕೊಡುವ ಸಲಹೆ ನೀಡುವುದರೊಂದಿಗೆ ’ಹೇಮಂತ ಗಾನ’ ಹೊಯ್ಸಳ ಕನ್ನಡ ಕೂಟದ ಅಧಿಕೃತ ಕಾರ್ಯಕ್ರಮಗಳ್ಳಲ್ಲೊಂದಾಯ್ತು.

  •  

  • ಯಶವಂತ್ ಗಡ್ಡಿ

bottom of page