
ಹಿಮದ ನಡುವೆ ಹೇಮಂತಗಾನ
ಪ್ರತೀ ವರ್ಷವೂ ಹೇಮಂತ ಋತುವಿನ ಆಗಮನದೊಂದಿಗೆ ಹೊಯ್ಸಳ ಕನ್ನಡ ಕೂಟವು ತನ್ನ ಇತಿಹಾಸದ ಅಧ್ಯಾಯಕ್ಕೆ ಮತ್ತೊಂದು ಹೆಮ್ಮೆಯ ಪುಟದ ಜೋಡಣೆಗೆ ಮುನ್ನುಡಿಯಿಡುತ್ತದೆ. ವರ್ಷಾರಂಭದ ಹಬ್ಬ ಸಂಕ್ರಮಣದೊಂದಿಗೆ ಎಳ್ಳು ಬೆಲ್ಲದಂತೆ ಮಿಳಿತಗೊಂಡಿರುವ ಹೇಮಂತಗಾನದ ತಯಾರಿ ಈ ವರ್ಷ ಭರ್ಜರಿಯಾಗಿಯೇ ನಡೆಯಿತು. ಈ ವರ್ಷದ ಹೇಮಂತಗಾನದ ವೇದಿಕೆ, ಕನೆಕ್ಟಿಕನ್ನಡಿಗರಿಗೆ ಮತ್ತೊಂದು ಸುಂದರ ನೆನಪುಗಳ ಸರಮಾಲೆಯ ಬುತ್ತಿ ಕಟ್ಟಿಕೊಡುವಲ್ಲಿ ಯಶಸ್ವಿಯಾಯಿತು .
ಕೇಳಿದರೆ ಮೈ ಜುಮ್ಮೆನ್ನಿಸುವ ನಾಡಗೀತೆಯೊಂದಿಗೆ ಪ್ರಾರಂಭವಾದ ಹೇಮಂತಗಾನ ಯಾವುದೇ ತೊಡರಿಲ್ಲದೆ 5 ಘಂಟೆಗಳ ಕಾಲ ಎಲ್ಲರನ್ನೂ ತನ್ನ ಮಾಯಾಜಾಲದಲ್ಲಿ ಮೈ ಮರೆಸಿದ್ದಂತೂ ನಿಜ. ಇಂಗ್ಲೀಷಿನ ಪಾಪ್ ಸಾಂಗ್ ನಿಂದ ಹಿಡಿದು ಕರ್ನಾಟಿಕ್ ಸಂಗೀತದವರೆಗೆ , ಅಮಿತಾಭ್ ಬಚ್ಚನ್ ನಿಂದ ಹಿಡಿದು Dr. ರಾಜಕುಮಾರರವರೆಗೆ , ಹಲವು ಪ್ರಸಿದ್ಧ ಗೀತೆಗಳಿಗೆ ಸಾಕ್ಷಿಯಾಯಿತು 2018ರ ಹೇಮಂತಗಾನ. ನಾವೇನು ಸಿನಿಮಾ ಗಾಯಕ - ಗಾಯಕಿಯರಿಗೆ ಕಡಿಮೆಯೇ ಎನ್ನುವಂತಿತ್ತು ಸುಮಧುರ ಕಂಠದ ಒಡೆಯರನೇಕರ ಹಾಡಿನ ವೈಖರಿ. ಒಂದೊಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕೆನಿಸುವ ಅನೇಕ ಹಾಡುಗಳು, ಮುಗಿದು ತಿಂಗಳಾದರೂ ಇನ್ನೂ ನೆನಪಿನಿಂದ ಮಾಸದೆ ಹಾಗೇ ಉಳಿದುಬಿಟ್ಟಿವೆ. ಹಾಡಿನ ಗಂಧಗಾಳಿಯೇ ಇರದ ನನ್ನಂತಹ ಅನೇಕರಿಗೆ ಒಂದು ಬಾರಿಯಾದರೂ ಹೇಮಂತಗಾನದ ವೇದಿಕೆಯಲ್ಲಿ ಹಾಡಿ ಆನಂದಿಸಬೇಕೆಂಬ ಮನಸಾಗಿರುವುದಂತೂ ನಿಜ.
ನಾವೇನು ಕಡಿಮೆಯೇ ಎನ್ನುವಂತಿದ್ದ ಪುಟಾಣಿಗಳ ಗಾಯನ ಮನಸ್ಸಿಗೆ ಆಹ್ಲಾದಕಾರಿಯಾಗಿತ್ತು . ಅಲ್ಲದೇ ಹೊಸ ಪ್ರತಿಭೆಗಳಿಗೆ ವೇದಿಕೆ ಸೃಷ್ಟಿ ಮಾಡಿಕೊಡುವಲ್ಲಿ ಹೇಮಂತಗಾನ ಯಶಸ್ವಿಯಾಯಿತು. ಮನೆಯಲ್ಲಿಯೇ ತಯಾರಿಸಿದ ಹಲವು ರುಚಿಕರ ತಿನಿಸುಗಳ ಔತಣದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡರೂ ಅನೇಕರು ಇನ್ನೂ ಅದೇ ಗುಂಗಿನಲ್ಲಿದ್ದಂತೆ ಕಂಡುಬಂದಿತು.
ಯಾವುದೇ ಭಾಷೆಯ ಪರಿಮಿತಿಗೆ ಬಾರದ "ಸಂಗೀತ"ದ ಆಕರ್ಷಣೆ ಬಲು ಮನೋಹರ. ಭಾಷೆಯ ಅರಿವಿಲ್ಲದಿದ್ದರೂ, ಹಾಡಿನ ಸಾಹಿತ್ಯ ಅರ್ಥವಾಗದಿದ್ದರೂ, ಸುಮಧುರ ಕಂಠ ಹಾಗೂ ಸಂಗೀತಕ್ಕೆ ತಲೆದೂಗದವರು ಬಹಳ ವಿರಳ. ಇಂತಹ ಅಧ್ಬುತ ಲೋಕಕ್ಕೆ ನಮ್ಮೆಲ್ಲರನ್ನೂ ಹೊತ್ತೊಯ್ದು, ಭಾವನಾಲೋಕದಲ್ಲಿ ವಿಹರಿಸುವಂತೆ ಮಾಡಿದ್ದಲ್ಲದೆ ಬದುಕಿನ ಅನೇಕ ಜಂಜಾಟಗಳನ್ನು ಕೆಲವು ಕ್ಷಣ ಮರೆಯುವಂತೆ ಮಾಡಿದ ಹೇಮಂತಗಾನಕ್ಕೆ ನಾವೆಲ್ಲರೂ ಚಿರಋಣಿಗಳು.ಇಂತಹ ಅದ್ಭುತ ಪರಿಕಲ್ಪನೆಯನ್ನು ಕನೆಕ್ಟಿಕನ್ನಡಿಗರಿಗೆ ಪರಿಚಯಿಸಿದ ಸಹೃದಯಿಗಳಿಗೆ ನಮ್ಮದೊಂದು ಕಿರುನಮನ.
ಹೇಮಂತಗಾನದ ಸವಿನೆನಪುಗಳ ಮೆಲುಕಿನೊಂದಿಗೆ ಯುಗಾದಿಗೆ ಸಜ್ಜಾಗುತ್ತಿರುವ ಹೊಯ್ಸಳ ಕನ್ನಡ ಕೂಟಕ್ಕೆ ನಿಮ್ಮೆಲ್ಲರ ಸಹಕಾರ , ಹರಕೆ - ಹಾರೈಕೆ ಸದಾ ಹೀಗೆ ನಿರಂತರವಾಗಿ ಹರಿದು ಬರಲಿ.
~ಶಾಶ್ವತಿ ಹಾರೆಕೊಪ್ಪ
Photo Link to Hemantagaana: https://photos.app.goo.gl/XZvr7PaJdN4tAsK22