
ನಮ್ಮ ಕನ್ನಡ ಶಾಲೆ
" ಭಾಷೆ " ಎನ್ನುವುದು ಒಂದು ಅಮೂರ್ತ ಪರಿಕಲ್ಪನೆ. ಮನುಷ್ಯರನ್ನು ಬೆಸೆಯುವ ಅತ್ಯದ್ಭುತ ಕೊಂಡಿ ಇದಾಗಿದೆ. ಮಗುವೊಂದು ತನ್ನ ತಾಯಿಯ ತುಟಿಗಳ ಚಲನೆಯನ್ನು ವೀಕ್ಷಿಸಿ ಕಲಿಯುವ ಭಾಷೆಯೇ ಮಾತೃಭಾಷೆ. ಮಾತೃಭಾಷೆಯ ಕಲಿಕೆ ಅದೇ ಪರಿಸರದಲ್ಲಿ ಬೆಳೆದ ಮಗುವಿಗೆ ಅತಿ ಸರಳ ಹಾಗೂ ಸರಾಗ. ಆದರೆ ವಿಭಿನ್ನ ಪರಿಸರದಲ್ಲಿ ಬೆಳೆಯುವ ಮಗುವಿಗೆ ಮಾತೃಭಾಷೆ ಪರಕೀಯವೆನ್ನಿಸುವುದರಲ್ಲಿ ಆಶ್ಚರ್ಯವೇನಿಲ್ಲ.
ಒಂದು ಭಾಷೆಯ ಕಲಿಕೆಗೆ ಕುಟುಂಬ, ಪರಿಸರ, ಮಾಧ್ಯಮ ಹಾಗೂ ಶಾಲೆ ಇವೆಲ್ಲವೂ ಪ್ರಮುಖ ಪಾತ್ರ ವಹಿಸುತ್ತವೆ. ಅಂತಹದರಲ್ಲಿ ಮಕ್ಕಳಿಗೆ ಕನ್ನಡ ಬರುವುದಿಲ್ಲವೇ ಎನ್ನುವ ಸಂಬಂಧಿಕರ ಠೀಕಾಪ್ರಹಾರಗಳ ನಡುವೆ,ಅಮೇರಿಕಾದ ಕನ್ನಡ ಮಕ್ಕಳ, ಕನ್ನಡ ಕಲಿಕೆ ಇಂದಿನ ಜಂಜಾಟದ ಬದುಕಿನಲ್ಲಿ ತಂದೆತಾಯಿಗಳಿಗೆ ತಲೆನೋವಾಗಿ ಪರಿಣಮಿಸಿರುವುದು ಸಹಜ.
ಯಾವುದೇ ಭಾಷೆಯಾದರೂ ಅದನ್ನು ಪಠ್ಯಕ್ರಮವಾಗಿ ಪರಿಚಯಿಸಿದರೆ, ಅದರ ಕಲಿಕೆ ಬಹು ಸುಲಭ. ಅಲ್ಲದೇ ಚಿಕ್ಕ ಮಕ್ಕಳು ಭಾಷಾ ಪಠ್ಯವನ್ನು ಕಲಿಯುವುದರಲ್ಲಿ ಅತೀ ಉತ್ಸುಕರಾಗಿರುತ್ತಾರೆ. ಇದು ಅವರ ಆಲೋಚನೆಯ ಮೇಲೂ ಪ್ರಭಾವ ಬೀರುತ್ತದೆ. ನಮ್ಮ ಆಲೋಚನೆಗಳು ನಮ್ಮ ಭಾಷೆಯನ್ನು ಅವಲಂಬಿಸಿರುತ್ತದೆ. ಹಾಗಾಗಿ ಮಕ್ಕಳ ಆಲೋಚನೆಗಳು ಹಲವು ಭಾಷೆಗಳಿಂದ ಕೂಡಿದ್ದಾದರೆ ಅವರ ಸೃಜನಶೀಲತೆ, ವಾಕ್ ಸಾಮರ್ಥ್ಯ ವೃದ್ಧಿಯಾಗುತ್ತದೆ.
ಇವೆಲ್ಲವನ್ನು ಪರಿಗಣನೆಗೆ ತೆಗೆದುಕೊಂಡ ಹೊಯ್ಸಳ ಕನ್ನಡ ಕೂಟವು online ಕನ್ನಡ ಶಾಲೆಯ ಸ್ಥಾಪನೆಗೆ ಮುನ್ನುಡಿಯಿಟ್ಟಿದೆ. ಇದು ಅನೇಕ ಪೋಷಕರ ಕೋರಿಕೆಯೂ ಹೌದು. ಪ್ರತೀ ಭಾನುವಾರ ನೀವಿದ್ದಲ್ಲಿಯೇ ಆನ್ಲೈನ್ ಮೂಲಕ ನಿಮ್ಮ ಮಕ್ಕಳಿಗೆ ಕನ್ನಡ ಕಲಿಸುವುದು ನಮ್ಮ ಧ್ಯೇಯವಾಗಿದೆ. ನಲಿಯುತ್ತಾ ಕಲಿತರೆ ಅದ್ಭುತಗಳನ್ನೇ ಸೃಷ್ಟಿಸಬಹುದು. ಈ ಅದ್ಭುತಗಳ ಸೃಷ್ಟಿಗೆ ಸಜ್ಜಾಗಿ ನಿಂತಿರುವ ನಮಗೆ ನಿಮ್ಮ ಪ್ರೋತ್ಸಾಹ, ಸಹಕಾರವೂ ಅತೀ ಮುಖ್ಯ.
ಕುಟುಂಬದ ಸಮಾವೇಶಗಳು ಬಹು ಸುಂದರ. ಅಂತಹ ಸುಂದರ ಸಮಾರಂಭಗಳಲ್ಲಿ, ನಾವು ಪರಕೀಯರು ಎನ್ನುವ ಭಾವನೆ ನಮ್ಮ ಮಕ್ಕಳಲ್ಲಿ ಮೂಡದೇ , ಅವರನ್ನು ನಮ್ಮ ಮೂಲಕೊಂಡಿಯೊಂದಿಗೆ ಬೆಸೆಯುವತ್ತ ನಡೆಯುತ್ತಿರುವ ಈ ಹಾದಿಯಲ್ಲಿ ನಮ್ಮ ಹೆಜ್ಜೆಯೊಂದಿಗೆ ನಿಮ್ಮ ಹೆಜ್ಜೆಯೂ ಸೇರಲಿ ಎಂದು ಹಾರೈಸುತ್ತೇವೆ.
ಅತೀ ಶೀಘ್ರದಲ್ಲಿ ಕನ್ನಡ ಶಾಲೆಯ ಬಗೆಗಿನ ಹೆಚ್ಚಿನ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ಶಾಲೆಯ ಕುರಿತು ಹೆಚ್ಚಿನ ವಿವರಗಳಿಗೆ ಅಥವಾ ಇನ್ಯಾವುದೇ ಸಂದೇಹಗಳಿದ್ದಲ್ಲಿ ಸಂಪರ್ಕಿಸಿ : ct.kannadakoota@gmail.com
~ಶಾಶ್ವತಿ ಹಾರೆಕೊಪ್ಪ & ಸುಮ ಬಸಂತ್