top of page

"ಬೆಳಗೆದ್ದು ಯಾರ ಮುಖವ ನಾನು ನೋಡಿದೆ" ಕಿರಿಕ್ ಪಾರ್ಟಿಯ ಕಚಗುಳಿ ಇಡುವ ಈ ಹಾಡನ್ನು ಬೆಳಬೆಳಗ್ಗೆ ಗುನುಗುತ್ತಾ Facebook ನೋಡ್ತಿದ್ದಾಗ ಊರಿನ ಕಡೆಯ ಫೇಸ್‌ಬುಕ್‌ ಸ್ನೇಹಿತರೊಬ್ಬರು ಊರಿನ ಸುಗ್ಗಿ ದೇವರ ಚಿತ್ರ ಹಾಕಿದ್ರು. ಅದನ್ನು ನೋಡ್ತಾ ಇದ್ದ ಹಾಗೆ, ಅದು  ಚಿಕ್ಕವನಿದ್ದಾಗ ಮನೆಯಲ್ಲಿ ಹೇಳುತ್ತಿದ್ದ ಒಂದು ಮಾತನ್ನು ಜ್ಞಾಪಿಸಿತು. ದಿನವೂ ಎದ್ದ ತಕ್ಷಣ ಮನೆಯಲ್ಲಿ ದೊಡ್ಡವರು ಹೇಳಿದ ಹಾಗೆ ದೇವರ ಚಿತ್ರ ನೋಡಿ ನಮಸ್ಕಾರ ಮಾಡಿ ಮುಂದಿನ ಕೆಲ್ಸ  ಶುರು ಮಾಡ್ತಾ ಇದ್ದ ನಮಗೆ, ಕಾಲ ಬದಲಾದ ಹಾಗೆ ನಮ್ಮ ದಿನಚರಿ ಕೂಡ ಬದಲಾಗಿದೆ. ಈಗ ಬೆಳಗ್ಗೆ ಸೆಲ್ ಫೋನ್ನಲ್ಲೇ ಹೊಡೆದ ಅಲಾರಾಂ ನಿಲ್ಲಿಸಿ, ಫೇಸ್ ಬುಕ್ ಇಲ್ಲಾ ವಾಟ್ಸ್ಅಪ್ ಮೊದಲು ನೋಡಿ, ದಿನನಿತ್ಯದ ಕಾರ್ಯಗಳನ್ನು ಪ್ರಾರಂಭಿಸುವ ಪರಿಪಾಟ ಪ್ರಾರಂಭವಾಗಿದೆ. ಈ ದಿನಚರಿ ಒಂದು ಸ್ವಲ್ಪ ಹೆಚ್ಚು ಕಡಿಮೆ ಆದರೂ ಮನಸ್ಸಲ್ಲಿ ಏನೋ ಒಂತರ ಕಸಿವಿಸಿ. ಫೇಸ್ ಬುಕ್ನಲ್ಲಿ ನಿನ್ನೆ ಹಾಕಿದ ಫೋಟೊ ಅಥವಾ  ಫೋಸ್ಟ್ಗೆ ಯಾರ್ಯಾರು ಇಷ್ಟ ಪಟ್ಟರು, ಯಾರ್ಯಾರು ಉತ್ತರಿಸಿದರು ಅಂತ ನೋಡಿ, ಉತ್ತರಗಳಿಗೆ  ಲೈಕ್ ಮಾಡುವ  ಕೆಲಸ ಆರಂಭ. ನಮ್ಮ ಪೋಸ್ಟ್ಗೆ ಕೆಲವರು ಇನ್ನೂ ಯಾಕೆ ಇಷ್ಟ ಪಟ್ಟಿಲ್ಲ, ಯಾಕೆ ಉತ್ತರಿಸಿಲ್ಲ ಅನ್ನೊ ಚಿಂತೆ ಬೇರೆ.  ಇರ್ಲಿ ನೋಡೋಣ, ಮುಂದಿನ ಸಾರಿ ಅವರು ಪೋಟೋ ಹಾಕ್ಲಿ,   ಪೋಸ್ಟ್ ಮಾಡ್ಲಿ, ನಾನು ಅದಕ್ಕೆ ಉತ್ತರಾನೂ ಬರೆಯೋಲ್ಲ, ಇಷ್ಟನೂ ಪಡೋಲ್ಲ  ಅನ್ನೊ ತೀರ್ಮಾನ ಮಾಡೋದು ಬೇರೆ. 

 

 ನಿನ್ನೆ ಯಾರ್ಯಾರು ಪಾರ್ಟಿ ಮಾಡಿದ್ರು, ಒಳ್ಳೆಯ ಊಟ ಮಾಡಿದ್ರು ಅಂತ  ಅವರು ಹಾಕಿದ ಪೋಟೊ ನೋಡಿ ತಿಳಿದು ಹೊಟ್ಟೆ ಉರಿದುಕೊಳ್ಳುವವರಿಗೇನೂ  ಕಡಿಮೆ ಇಲ್ಲ. ಅವರ ಪಾರ್ಟಿಗೆ ನನಗೆ ಆಗದವರನ್ನು ಕರೆದಿದ್ದಾರೆ, ನನ್ನನ್ನು ಯಾಕೆ ಬಿಟ್ಟಿದ್ದಾರೆ ಅಂತ ಕೊರಗದವರಿಲ್ಲ. ರಜೆಯಲ್ಲಿದ್ದಾಗ ಫೋಟೊ, ಸೆಲ್ಫಿ ಹಾಕಿ ಅವುಗಳಿಗೆ ಬರುವ ಲೈಕ್ ಮತ್ತು ಉತ್ತರಗಳನ್ನು ನೋಡುತ್ತಾ ರಜೆಯ ಸವಿಯನ್ನು ಸವಿಯವದರೆಷ್ಟೊ. ತಿಳಿದೋ ಇಲ್ಲಾ ತಿಳಿಯದೆಯೋ  ಬರೆದ ಕಾಮೆಂಟ್ ಗಳು ಬೇರೆಯವರ ಅಭಿಪ್ರಾಯಗಳಿಗೆ ವಿರುದ್ಧವಾಗಿದ್ದು ಅವರ ಅಸಮಾಧಾನಕ್ಕೂ ಮತ್ತು ಸಿಟ್ಟಿಗೂ ಗುರಿಯಾದವರೆಷ್ಟೊ. ಸುಳ್ಳು ಸುದ್ದಿಗಳನ್ನು, ನಕಲಿ ಚಿತ್ರಗಳನ್ನು ನಂಬಿ Troll ಮಾಡಿಕೊಂಡು ಕಾಲ ಕಳೆಯುವರಷ್ಟೊ. ಮನೆಯೊಳಗೆ ಮಾತನಾಡುವುದಕ್ಕಿಂತ  ಫೇಸ್‌ಬುಕ್‌, ವಾಟ್ಸ್ಆಪ್ ಗಳಲ್ಲಿ ಮುಳುಗಿರುತ್ತಾರೆಂದು ಮನೆಯವರು ಮುನಿಸಿಕೊಂಡವರೆಷ್ಟೊ.  ಬೇರೆಯವರ ಸಾಮಾಜಿಕ ಜಾಲತಾಣಗಳಲ್ಲಿ ತೋರಿಕೆಯ ಸುಂದರ ಸುಖೀ ಜೀವನ ನೋಡಿ ಮನಸ್ಸಲ್ಲೆ ಕೊರಗುತ್ತಾ ಶುರುವಾಗುವ ದಿನ ಹೇಗೆ ಚೆನ್ನಾಗಿರಲು ಸಾಧ್ಯ? ಇದು ಮನಸ್ಸಿನ ಒತ್ತಡಕ್ಕೂ, ಖಿನ್ನತೆಗೂ ಕಾರಣವಾಗುತ್ತೆಂದು ಸಂಶೋಧನೆಗಳು ಹೇಳಿವೆ. ದಿನವಿಡೀ ಇಂತಹದರಲ್ಲಿ ಕಾಲಹರಣ ಮಾಡಿದರೆ ಎಷ್ಟು ಸಮಯ ಹಾಳು. ಜೊತೆಗೆ ಏಕಾಗ್ರತೆಯ ಕೊರತೆಯಿಂದ ಮುಖ್ಯವಾದ ಕೆಲಸಗಳಿಗೆ ಆಗುವ ಹಾನಿ ಕಡಿಮೆಯೇನಿಲ್ಲ. ಇಷ್ಟೆಲ್ಲಾ ತೊಂದರೆ ಯಾಕೆ ಇವೆಲ್ಲದರಿಂದ ದೂರವಿರೋಣವೆಂದರೆ,  ಸಾಮಾಜಿಕ  ಸಂಬಂಧಗಳನ್ನು ಕಡಿದುಕೊಳ್ಳುತ್ತೇವೆಂಬ ಭಯ.

 

ಜಾಲತಾಣಗಳಲ್ಲಿ ನಾವು ಹಾಕುವ ವೈಯಕ್ತಿಕ ವಿಷಯಗಳು ಎಷ್ಟು ಸುರಕ್ಷಿತ, ಯಾರ್ಯಾರು ನೋಡ್ತಾರೆ, ಅದನ್ನು ಹೇಗೆ ಉಪಯೋಗಿಸಿಕೊಳ್ತಾರೆ ಅನ್ನುವುದು ಮುಂಚಿನಿಂದಲೂ ಚರ್ಚೆಯಾಗುತ್ತಿರುವ ವಿಷಯ. ರಜೆಯಲ್ಲಿದ್ದಾಗ ಕೆಲವರು ಹಾಕುವ ಫೋಟೊ, ಸೆಲ್ಫಿ, ಪೋಸ್ಟ್ ನೋಡಿ ಕಳ್ಳರು ಮನೆಗಳಲ್ಲಿ ಕಳ್ಳತನ ಮಾಡಿರುವ ಉದಾಹರಣೆಗಳಿಗೇನೂ ಕಡಿಮೆಯಿಲ್ಲ. ಜಾಲತಾಣಗಳಲ್ಲಿಯ ನಮ್ಮ ಗುರುತುಗಳು ಹಿಮದ ಮೇಲಿನ ಹೆಜ್ಜೆಗಳಂತಲ್ಲ, ಅವು ಶಾಶ್ವತ. ನಾವು ಹಾಕುವ ನಮ್ಮ ವೈಯಕ್ತಿಕ ಮಾಹಿತಿ,  ವಿಷಯಗಳೇ  ಬಂಡವಾಳವಾಗಿರುವ ಸಾಮಾಜಿಕ ಜಾಲತಾಣ ಸಂಸ್ಥೆಗಳಿಂದ ನಮ್ಮ ಖಾಸಗಿ ಜೀವನ ಖಾಸಗಿಯಾಗಿ ಉಳಿದಿಲ್ಲ. ಅದರಲ್ಲೇನಿದೆ, ನಾವು ಹಾಕುವ ನಮ್ಮ ಮಾಹಿತಿ ನೋಡಿ ಯಾರು ಏನು ಮಾಡಲು ಸಾಧ್ಯವೆನ್ನುವ ಅಭಿಪ್ರಾಯವಿರುವ ಸ್ನೇಹಿತರು  ನಮ್ಮಲ್ಲೇ  ಬಹಳಷ್ಟು ಇದ್ದಾರೆ. ಆದರೆ ಇತ್ತೀಚೆಗೆ ಬೆಳಕಿಗೆ ಬಂದ ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆಯ ಹಗರಣ ಆ ಅಭಿಪ್ರಾಯ ನಿಜವಲ್ಲವೆಂದು ನಿರೂಪಿಸಿದೆ. ಫೇಸ್‌ಬುಕ್‌ ಬಳಕೆದಾರರಿಂದ ಸಂಗ್ರಹಿಸಿದ ಮಾಹಿತಿಗಳನ್ನು ಸಂಸ್ಕರಿಸಿ ತಮಗೆ ಬೇಕಾದಂತೆ  ಜನಾಭಿಪ್ರಾಯ ಮೂಡಿಸಿ ಅದನ್ನು ತಮ್ಮ ಅನೂಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಹುದೆಂದು ತೋರಿಸಿದ್ದಾರೆ. ಇದು ಎಲ್ಲರ ಜೀವನದ ಮೇಲೂ ನೇರವಾಗಿ ಪರಿಣಾಮ ಬೀರಿದೆ ಅನ್ನೊದರಲ್ಲಿ ಅನುಮಾನವೇ ಬೇಡ.

 

 ಹುಟ್ಟಿದೂರಿನಿಂದ ಬಹುದೂರವಿರುವ ನಮಗೆ ಈ ಸಾಮಾಜಿಕ ಜಾಲತಾಣಗಳು ಒಂದು ಕೊಂಡಿಯೆ ಸರಿ. ಚಿಕ್ಕವರಿದ್ದಾಗ ಇದ್ದ ಜೊತೆಯವರು, ನೆಂಟರು, ಇಷ್ಟರ ಕೊಂಡಿಯನ್ನು ಉಳಿಸಿಕೊಳ್ಳುವುದರಲ್ಲಿ ಇವುಗಳ ಕೊಡುಗೆ ಅತ್ಯದ್ಭುತ. World is a global village ಅನ್ನುವ ಮಾತಿಗೆ ಸಹಾಯಕವಾಗಿ ಇವು ಕೆಲಸ ಮಾಡುತ್ತಿವೆ.  ಈ ಸಾಮಾಜಿಕ ಜಾಲತಾಣದಲ್ಲಿಯೇ ತುಂಬಾ ಕಾಲಹರಣ ಮಾಡದೆ, ಹಿತ ಮಿತವಾಗಿ ಬಳಸಿಕೊಂಡು, ವಿವೇಕದ ಸಂಕೇತವಾದ ಹಂಸಪಕ್ಷಿಯ ಹಂಸಕ್ಷೀರ ನ್ಯಾಯದಂತೆ ಒಳಿತನ್ನು ಮಾತ್ರ ತೆಗೆದುಕೊಂಡು ಕೆಡುಕನ್ನು ಓದಿ ಅಲ್ಲೇ ಮರೆಯುವುದರಲ್ಲಿಯೇ ನಮ್ಮ ಹಿತ ಇದೆ. ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಲಿ, ಬಿಡಲಿ,  ಒಟ್ಟಿನಲ್ಲಿ ನಿರಂತರ ಸಂಪರ್ಕದಲ್ಲಿರಿ!

~ಬಾಲ ಗೌಡ

Hoysala KannAda Koota

Contact HKK at

ct.kannadakoota@gmail.com

Success! Message received.

  • White Facebook Icon
  • White YouTube Icon

@2017 by Hoysala Kannada Koota  A Non-Profit 501(c)(3) Entity. All Rights Reserved.

bottom of page