ಯಶಸ್ವೀ ಯುಗಾದಿ

 

        ಹೊಯ್ಸಳ ಕನ್ನಡ ಕೂಟದ ಬಹು ನಿರೀಕ್ಷಿತ "ಯುಗಾದಿ" ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಆ ಸುಂದರ ಕ್ಷಣಗಳ ನೆನಪುಗಳನ್ನು ಮೆಲುಕು ಹಾಕುವ ಒಂದು ಸಣ್ಣ ಪ್ರಯತ್ನ.

          

        ಪ್ರತೀ ಸಲದಂತೆ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ನಂತರ ನಡೆದ ಪುಟಾಣಿ ಮಕ್ಕಳ ಫ್ಯಾನ್ಸಿ ಡ್ರೆಸ್ ಅಥವಾ ವಿವಿಧ ವೇಷಾವಳಿ ಕಾರ್ಯಕ್ರಮದಲ್ಲಿ,  ನಮ್ಮ ಕೂಟದ ಅನೇಕ ಪುಟಾಣಿ ಪ್ರತಿಭೆಗಳ ರಂಗುರಂಗಿನ ತರಂಗಗಳು ಅನಾವರಣಗೊಂಡಿದ್ದಲ್ಲದೇ, ಎಲ್ಲರ ಮನ್ನಣೆಗೂ ಪಾತ್ರವಾಯಿತು.

  

          ಭಾರತ ದೇಶವನ್ನು ಬ್ರಿಟೀಷರಿಂದ ಮುಕ್ತಗೊಳಿಸಿ, ಭವ್ಯ ಭಾರತವನ್ನು ನಿರ್ಮಿಸಲು ಪಣತೊಟ್ಟಿ ನಿಂತ, ಅನೇಕ ಮಹಾನ್ ವ್ಯಕ್ತಿಗಳನ್ನು ಪರಿಚಯಿಸಿದ "ಭಾರತಾಂಬೆಯ ಮಕ್ಕಳು" ಕಾರ್ಯಕ್ರಮ ಬಹಳ ಸುಂದರವಾಗಿ ಮೂಡಿಬಂದಿದ್ದಲ್ಲದೇ, ಎಲ್ಲರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

  

           ಲಯಬದ್ಧವಾಗಿ ಸಂಗೀತಕ್ಕೆ ದೇಹವನ್ನು ಚಲಿಸುವ ಕಲೆಯೇ ನೃತ್ಯಕಲೆ. ಇದರಲ್ಲಿ ಅನೇಕ ಪ್ರಾಕಾರಗಳನ್ನು ನೋಡಬಹುದು. ಭಾರತೀಯ ನೃತ್ಯಕಲೆಗಳ ಅವಿಚ್ಚಿನ್ನ, ಅವಿನಾಶಿ ಪರಂಪರೆ ಜಗತ್ತಿನ ಉಳಿದೆಲ್ಲಾ ನೃತ್ಯಕಲೆಗಳಿಗೊಂದು ಆದರ್ಶ. ಇಂತಹ ಸುಂದರ ನೃತ್ಯಗಳೊಂದಿಗೆ ಅನೇಕ ನೃತ್ಯತಂಡಗಳು ಎಲ್ಲರ ಕಣ್ಮನ ಸೆಳೆದವು.

        

            ಋತುಗಳೊಂದಿಗಿನ ಮನುಷ್ಯನ ಸಂಬಂಧವನ್ನು ಹಾಸ್ಯಮಯ ಸಂವಾದ ಹಾಗೂ ಸಮೂಹಗಾನದ ಮೂಲಕ, ಬಹಳ ಸುಂದರವಾಗಿ ನಮ್ಮ ಮುಂದಿಟ್ಟ "ರಮ್ಯಚೈತ್ರ" ತಂಡದ ಕಾರ್ಯಕ್ರಮ ಎಲ್ಲರ ಶ್ಲಾಘನೆಗೆ ಪಾತ್ರವಾಯಿತು. 

 

            ಕೊನೆಯಲ್ಲಿ ನಡೆದ ಕಾರ್ಯಕ್ರಮವೇ ಅರೆ ಜಾನಪದ  ಕಲೆಯಾದ ಹರಿಕಥೆ ಕಾರ್ಯಕ್ರಮ. ಹರಿಕಥೆ ಎನ್ನುವುದು ಭಕ್ತಿಪ್ರಚಾರದ ಸಮಯದಲ್ಲಿ ಹುಟ್ಟಿಕೊಂಡ ಒಂದು ಕಲೆ. ಇಂತಹ ಮಹಾನ್ ಕಲೆಯ ಹೆಸರಾಂತ ವಿದ್ವಾಂಸೆ "ಶ್ರೀಮತಿ ವೀಣಾಮೋಹನ್"  ಹಾಗೂ ಅವರ ತಂಡದವರು ಅದ್ಭುತವಾಗಿ ಹರಿಕಥೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 

 

         ಕನ್ನಡಿಗರ ಮನಸ್ಸು ಬಹಳ ದೊಡ್ಡದು, ಹಾಗೆಯೇ ಕನ್ನಡ ಕೂಟದ ಊಟದಲ್ಲಿನ ತಿನಿಸುಗಳ ಪಟ್ಟಿಯೂ ಕೂಡ ಯಾವಾಗಲೂ ಬಹಳ ದೊಡ್ಡದು. ಅಜ್ಜಿಯ ಕೈರುಚಿ ನೆನಪಿಸುವ ಅನೇಕ ತರಹೇವಾರಿ ಹಬ್ಬದ ತಿನಿಸುಗಳು ಎಲ್ಲರ ಬಾಯಿರುಚಿಯನ್ನು ತಣಿಸುವಲ್ಲಿ ಯಶಸ್ವಿಯಾದವು.

ಇವೆಲ್ಲದಕ್ಕೂ ಮೆರುಗೆಂಬಂತೆ ಮಲ್ಲಿ ಸಣ್ಣಪ್ಪನವರ್ ಅವರ ವರದಿಯಿಂದ ಕನ್ನಡದ ದೃಶ್ಯ ಮಾಧ್ಯಮವೊಂದರಲ್ಲಿ, ನಮ್ಮ ಯುಗಾದಿ ಕಾರ್ಯಕ್ರಮದ  ಬಗ್ಗೆ ಸುದ್ದಿ ಬಿತ್ತರಗೊಂಡಿದ್ದು ವಿಭಿನ್ನ ಹಾಗೂ ವಿಶೇಷವಾಗಿತ್ತು.

  

        ಅಲ್ಲದೇ ಕಾರ್ಯಕ್ರಮದ ಆಯೋಜಕರಿಗೆ ವಂದಿಸಿ ಬಂದ ಅನೇಕರ ಪ್ರತಿಕ್ರಿಯೆಗಳು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಯಿತು. ಒಟ್ಟಿನಲ್ಲಿ ಮತ್ತೊಂದು ಯಶಸ್ವೀ ಕಾರ್ಯಕ್ರಮದೊಂದಿಗೆ ಕನೆಕ್ಟಿಕನ್ನಡಿಗರ ಪ್ರೀತಿಗೆ ಪಾತ್ರವಾದ ಹೊಯ್ಸಳ ಕನ್ನಡ ಕೂಟಕ್ಕೆ ನಿಮ್ಮೆಲ್ಲರ ಸಹಕಾರ ಹಾಗೂ ಪ್ರೋತ್ಸಾಹ ಹೀಗೆಯೇ ಮುಂದುವರೆಯಲಿ.

~ಶಾಶ್ವತಿ ಹಾರೆಕೊಪ್ಪ

Hoysala KannAda Koota

203-40-CTHKK (203-402-8455)

ct.kannadakoota@gmail.com

  • White Facebook Icon
  • White YouTube Icon

@2017 by Hoysala Kannada Koota  A Non-Profit 501(c)(3) Entity. All Rights Reserved.