top of page
ಭಯದ ನೆರಳಲ್ಲಿ

 

ನಾವು ಭಾರತೀಯರು. ಹುಟ್ಟಿದ ದೇಶ ಬಿಟ್ಟು , ದೂರದ ಅಮೇರಿಕಾಗೆ ಬಂದು, ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವವರು ನಾವು. "ಗನ್" ಎನ್ನುವ ಹೆಸರು ಕೇಳಿದರೇನೇ ಬೆಚ್ಚಿಬೀಳುವ ನಮಗೆ , ಪ್ರತಿನಿತ್ಯ ನಮ್ಮ ಮಕ್ಕಳು ಹೋಗುತ್ತಿರುವ ಶಾಲೆಗಳಲ್ಲಿ ನಡೆಯುತ್ತಿರುವ ಗನ್ ಹಿಂಸೆ ಅರಗಿಸಿಕೊಳ್ಳಲಾಗದ ಸಂಗತಿಯಾಗಿದೆ. ಅದೊಂದು ಕಾಲವಿತ್ತು , ಮಕ್ಕಳು ಶಾಲೆಗೆ ಹೋಗಿದ್ದಾರೆಂದರೆ ನಿಶ್ಚಿಂತ ಭಾವ. ಯಾಕೆಂದರೆ ಶಾಲೆ, ಅಪರಾಧ ಜಗತ್ತಿನಿಂದ ಬಹಳ ದೂರವಿದೆ ಎನ್ನುವ ನಂಬಿಕೆ. ಆದರೆ ಕನೆಕ್ಟಿಕಟ್ನ ನ್ಯೂಟೌನ್ ಹಾಗೂ ಫ್ಲೋರಿಡಾದ ಶಾಲೆಗಳಲ್ಲಿ ನಡೆದ ಘಟನೆಗಳು, ಅಲ್ಲದೇ ಆಗಾಗ್ಗೆ  ದೇಶದ್ಯಾಂತ ನಡೆಯುತ್ತಿರುವ ಇದೇ ತರಹದ ಬೆಳವಣಿಗೆಗಳು, ಈ ನಂಬಿಕೆಯ ಬುಡವನ್ನು ಅಲ್ಲಾಡಿಸುತ್ತಲೇ ಇರುತ್ತವೆ. ಈ ತರಹದ ಘಟನೆಗಳು ನಡೆದಾಕ್ಷಣ  ಗನ್‌ ಹತೋಟಿ, ಮಾನಸಿಕ ಆರೋಗ್ಯ, NRA ಲಾಬಿ ಮತ್ತು ಸಂವಿಧಾನದ ಎರಡನೇ ತಿದ್ದುಪಡಿಯ ಸುತ್ತ ವಿಷಯಗಳು ಗಿರಕಿ ಹೊಡೆದು, ಮತ್ತೆ ತಣ್ಣಾಗಾಗುವದು ದೌರ್ಭಾಗ್ಯವೇ ಸರಿ.

 ಈ ಸ್ಥಿತಿಯಲ್ಲಿ  ಮಕ್ಕಳನ್ನು ಶಾಲೆಗೆ ಕಳುಹಿಸಿ ದಿನವಿಡೀ ಆತಂಕದಿಂದ ಕಳೆಯುವ ಪರಿಸ್ಥಿತಿ ಎದುರಾಗಿದೆ. ಪ್ರತೀ ದಿನ ನಮ್ಮ ಮಕ್ಕಳನ್ನು ರಕ್ಷಿಸು ಎಂದು ದೇವರಿಗೆ ಕೈಮುಗಿಯುವ ನಮಗೆ , ಮನದ ಮೂಲೆಯಲ್ಲೊಂದು ಕಡೆ , ನಮ್ಮ ಮಕ್ಕಳಿಗೆ ಏನೂ ಆಗುವುದಿಲ್ಲ ಎಂಬ ಸಣ್ಣ ಭರವಸೆ. ಹಾಗಾಗಿಯೇ ಎಷ್ಟೊ ಬಾರಿ ನಮ್ಮ ನಾಡಿಗೆ ತಿರುಗಿ ಹೋಗುವ ಮನಸ್ಸಾದರೂ, ಇಲ್ಲೇ ಬದುಕು ಸಾಗಿಸುವ ಮನಸ್ಸು ಮಾಡಿರುವುದು. ನಮಗೇ ಹೀಗಾದರೆ ಇಂತಹ ಘೋರ ಸುದ್ದಿಯನ್ನು ಕೇಳಿ, ಬೆಳಗೆದ್ದು ಮತ್ತದೇ ಶಾಲೆಗೆ ಹೋಗುವ ಮಕ್ಕಳ ಮನಸ್ಥಿತಿ ಹೇಗಿರಬೇಡ? ಅವರಿಗೆ ಗನ್ನಿನ ಬಗ್ಗೆ ಅರಿವು ಮೂಡಿಸಿ, ಅವರ ರಕ್ಷಣೆಗೆ ಬೇಕಾದ ಕ್ರಮ ಕೈಗೊಳ್ಳುವುದು ತಂದೆತಾಯಿಗಳಾದ ನಮ್ಮ ಜವಾಬ್ದಾರಿಯಾಗಿದೆ. 

   ಸಮಸ್ಯೆ  ಗನ್ ನಿಯಮದ್ದೋ , ಮಾನಸಿಕ ಅಸಮತೋಲನದ್ದೋ , ಅಥವಾ  NRA ಲಾಬಿಯದ್ದೋ , ಆದರೆ ಪರಿಣಾಮ ಮಾತ್ರ ಅತಿಭಯಾನಕ, ಊಹಿಸಿಕೊಳ್ಳಲೂ ಅಸಾಧ್ಯ , ದೇಶದ ಅಭಿವೃದ್ಧಿಗೆ ಮಾರಕ. ಹಾಗಾಗಿ ಈ ವಿಷಯದ ಮೇಲಿನ ಸರ್ಕಾರದ ನಿಲುವು , ಧೋರಣೆ ಹಾಗೂ ನಿರ್ಧಾರಗಳ ಮೇಲೆ ಮುಂದಿನ ಪೀಳಿಗೆಯ ಭವಿಷ್ಯ ನಿಂತಿದೆ ಎಂದರೆ ತಪ್ಪಲ್ಲ.

    ನಮ್ಮ ಮಕ್ಕಳ ಭವಿಷ್ಯದ ನಿರ್ಧಾರಕರು ನಾವಲ್ಲದಿದ್ದರೂ, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚೆತ್ತುಕೊಳ್ಳುವಲ್ಲಿ ಮತ್ತದರ ಬಗ್ಗೆ ಜ್ಞಾನವನ್ನು  ಹೆಚ್ಚಿಸಲು ನಮ್ಮ ಪಾತ್ರವೂ ಮುಖ್ಯವಾಗಿದೆ ಎಂಬುದನ್ನು ಮರೆಯದಿರೋಣ. ಮಕ್ಕಳಿಗೆ ಆಟಿಕೆಯಂತಾಗಿರುವ ಗನ್ ಗಳ ಬಗ್ಗೆ ಹಾಗೂ ಅದರ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವತ್ತ ಕೈ ಜೋಡಿಸೋಣ. ಗನ್ ಗಳನ್ನು ಹತೋಟಿಗೆ ತರುವ ಪ್ರಯತ್ನಕ್ಕೆ ಬೆಂಬಲ ಕೊಡೋಣ. ಅಲ್ಲದೇ  “see something, say something” ಪ್ರಚಾರದ ಬಗ್ಗೆ ತಿಳುವಳಿಕೆ ಹೆಚ್ಚಿಸಿಕೊಂಡು ಮಕ್ಕಳಿಗೂ ತಿಳಿಸೋಣ ಹಾಗೂ 

ಸಾಧ್ಯವಾದಲೆಲ್ಲ ನಾಯಕರುಗಳ ಮೇಲೆ ಒತ್ತಡ ಹೇರೋಣ.  ಇದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ಈ ಪ್ರಯತ್ನಗಳು ಫಲ ನೀಡಿ ಶಾಲೆಗಳು ಮತ್ತು ಸಮಾಜವು ಬಂದೂಕಿನ ಹಿಂಸೆಯ ಬಂಧನದ ಸಂಕೋಲೆಯನ್ನು ಕಳಚಿ, ಶಾಂತಿಯುತ ನಾಗರೀಕ ಸಮಾಜವಾಗಲಿ ಎಂಬುವುದು ನಮ್ಮ ಆಶಯ.

~ಶಾಶ್ವತಿ ಹಾರೆಕೊಪ್ಪ  & ಬಾಲ ಗೌಡ

bottom of page